ಡಿಸೆಂಬರ್ 24 ಮಕ್ಕಳ ಸಮಸ್ಯೆಗೆ ಕಾಡಲ್ಲಿ ಪರಿಹಾರ
Posted date: 11 Sat, Feb 2023 08:44:48 AM

ಆಗತಾನೆ ಹುಟ್ಟಿದ ಮಕ್ಕಳು ಉಸಿರಾಟದ ಸಮಸ್ಯೆಯಿಂದ ಇದ್ದಕ್ಕಿದ್ದಹಾಗೆ ಸಾವನ್ನಪ್ಪುತ್ತಿರುವ ಘಟನೆಗೆ ಸಂಬಂಧಿಸಿದಂತೆ ನಡೆಯುವ ಘಟನೆಗಳನ್ನಿಟ್ಟುಕೊಂಡು  ನಾಗರಾಜ್ ಎಂಜಿ ಗೌಡ ಅವರು  ಡಿಸೆಂಬರ್ 24 ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಪಕ್ಕಾ ಥ್ರಿಲ್ಲರ್ ಜಾನರ್‌ನಲ್ಲಿ  ಮೂಡಿಬಂದಿರುವ ಈ ಚಿತ್ರದಲ್ಲಿ ನಾಯಕ ಅಜಯ್(ಅಪ್ಪು ಬಡಿಗೇರ್) ತನ್ನ ಅಕ್ಕನ ಮಗು ಹುಟ್ಟಿದ ಕೂಡಲೇ ಉಸಿರಾಟ ನಿಲ್ಲಿಸಿದ ಘಟನೆಯಿಂದ ವಿಚಲಿತನಾದಾಗ ಆತನ ಸ್ನೇಹಿತರೆಲ್ಲ  ದೈರ್ಯ ತುಂಬುತ್ತಾರೆ. ಅವರೆಲ್ಲ  ಮೆಡಿಕಲ್ ಓದುತ್ತಿರುವ  ಗೆಳೆಯರು. ಹೇಗಾದರೂ ಮಾಡಿ ಈ ಸಮಸ್ಯೆಗೆ ಒಂದು ಪರಿಹಾರ ಕಂಡುಹಿಡಿಯಬೇಕೆಂದು ಸಾಕಷ್ಟು  ಸರ್ಚ್ ಮಾಡಿದಾಗ ಉಡದ ಮೊಟ್ಟೆ, ಅದರಲ್ಲೂ  ಅದು ಕಾವು ಕೊಟ್ಟಿರುವ ಮೊಟ್ಟೆಯಿಂದ  ಈ ಸಮಸ್ಯೆಗೆ ಔಷಧವನ್ನು ತಯಾರಿಸಬಹುದೆಂದು ತಿಳಿಯುತ್ತದೆ. ಅದನ್ನು ನಂಬಿದ ಈ ಎಂಟು ಜನ ವಿದ್ಯಾರ್ಥಿಗಳು ಉಡದ ಮೊಟ್ಟೆಯನ್ನರಸಿಕೊಂಡು ಕಾಡಿಗೆ ಬರುತ್ತಾರೆ. ಇಲ್ಲಿ `ಡಿಸೆಂಬರ್ 24` ಉಡ ತಾನಿಟ್ಟ ಮೊಟ್ಟೆಗೆ ಕಾವು ಕೊಡುವ ದಿನ. ಅದೇ ಚಿತ್ರದ ಶೀರ್ಷಿಕೆಯಾಗಿದೆ. ಅಜಯ್, ಕಾವ್ಯ(ಭೂಮಿಕಾ ರಮೇಶ್) ಸೇರಿದಂತೆ ಗೆಳೆಯರೆಲ್ಲ ಒಂದು ದಟ್ಟ ಕಾಡಿಗೆ ಬಂದು ಅಲ್ಲಿ  ಮಾದಕ ವಸ್ತುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ  ಗ್ಯಾಂಗ್ ಲೀಡರ್(ಅನಿಲ್ ಗೌಡ್ರು) ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆ ಗ್ಯಾಂಗ್‌ನೊಂದಿಗೆ ಹೊಡೆದಾಟ ನಡೆಸಿ ಹೇಗೋ ತಪ್ಪಿಸಿಕೊಂಡು ಬಂದ ಈ ಸ್ನೇಹಿತರಿಗೆ ತಾವು ಹುಡುಕುತ್ತಿದ್ದ  ಮೊಟ್ಟೆಗಳು ಕೊನೆಗೂ ಸಿಗುತ್ತವೆ, ಮೊಟ್ಟೆ ಸಿಕ್ಕ ಖುಷಿಯಲ್ಲೆ ಆ ಕಾಡಿಂದ ಹೊರಹೋಗಬೇಕೆನ್ನುವ  ಹೊತ್ತಿಗೆ ಕತ್ತಲಾಗಿ ಒಂದು ಹಾಳು ಮನೆಯೊಳಗೆ ಸೇರಿಕೊಳ್ಳುತ್ತಾರೆ.  ಆ ಮನೆ ಭೂತಬಂಗ್ಲೆ ಎಂದೇ ಆ ಭಾಗದಲ್ಲಿ ಹೆಸರುವಾಸಿಯಾಗಿರುತ್ತದೆ,  ಆ ಮನೆಯೊಳಗೆ ಹೋದ ಯಾರೊಬ್ಬರೂ ಇದುವರೆಗೆ ಬದುಕಿಬಂದ ಉದಾಹರಣೆಗಳಿಲ್ಲ, ಅಂಥಾ ಸಾವಿನ ಮನೆಯೊಳಗೆ ಹೋದ ಇವರನ್ನು ಆರಂಭದಿಂದಲೂ  ಗಮನಿಸುತ್ತಿದ್ದ ಸ್ಥಳೀಯ ಫಾರೆಸ್ಟ್ ಆಫೀಸರ್(ಆನಂದ್ ಪಟೇಲ್ ಹುಲಿಕಟ್ಟೆ) ಆ ವಿದ್ಯಾರ್ಥಿಗಳನ್ನು ಅಲ್ಲಿಂದ ರಕ್ಷಿಸಿ ಹೊರತರುತ್ತಾರೆ. ಆ ಮನೆಯಲ್ಲಿ  ಅಂಥಾದ್ದೇನಿದೆ, ಅಲ್ಲಿ ಹೋದವರು ಯಾಕೆ ಬದುಕಿ ಬರೋದಿಲ್ಲ, ಇದಕ್ಕೆಲ್ಲ  ಉತ್ತರ ಬೇಕೆಂದರೆ ನೀವೆಲ್ಲ ಒಮ್ಮೆ ಥೇಟರ್‌ಗೆ ಹೋಗಿ  ಡಿಸೆಂಬರ್ ೨೪ ಚಿತ್ರವನ್ನು ವೀಕ್ಷಿಸಲೇಬೇಕು. ಇಲ್ಲಿ ಭಾಗ್ಯಲಕ್ಷ್ಮಿ ಖ್ಯಾತಿಯ ಭೂಮಿಕಾ ರಮೇಶ್ ನಾಯಕಿಯಾಗಿ ತನ್ನ ಮುಗ್ಧ ಅಭಿನಯದ ಮೂಲಕ ನೋಡುಗರಿಗೆ ಇಷ್ಟವಾಗುತ್ತಾರೆ.  ನಾಯಕನಾಗಿ ಅಪ್ಪು ಬಡಿಗೇರ್  ತನ್ನ ಸಹಜಾಭಿನಯದಿಂದಲೇ ಗಮನ ಸೆಳೆಯುತ್ತಾರೆ. ಉಳಿದಂತೆ ರವಿ ಕೆ.ಆರ್. ಪೇಟೆ, ಜಗದೀಶ್, ದಿವ್ಯಆಚಾರ್, ಸಾಗರ್ ಸೇರಿದಂತೆ ಎಲ್ಲರೂ ತಂತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಛಾಯಾಗ್ರಾಹಕ ವಿನಯ್‌ಗೌಡ  ಅವರ ಕ್ಯಾಮೆರಾದಲ್ಲಿ  ದಾಂಡೇಲಿ ಫಾರೆಸ್ಟ್ ಅತ್ಯದ್ಭುತವಾಗಿ  ಸೆರೆಯಾಗಿದೆ. ಫ್ರೆಂಡ್‌ಷಿಪ್‌ಗೆ ಹೆಚ್ಚು ಪ್ರಾಮುಖ್ಯತೆ ಇರುವ ಕಥೆ ಇದಾಗಿದ್ದು, ಇದೇ ಕಾರಣಕ್ಕೆ ಚಿತ್ರ ನೋಡುಗರಿಗೂ ಇಷ್ಟವಾಗುತ್ತದೆ.  ಪ್ರವೀಣ್‌ ನಿಕೇತನ್ ಹಾಗೂ ವಿಶಾಲ್‌ ಆಲಾಪ್ ಅವರ ಸಂಗೀತದಲ್ಲಿ ಮೂಡಿಬಂದಿರುವ  ಹಾಡುಗಳು  ಒಮ್ಮೆ ಕೇಳಲು ಅಡ್ಡಿಯೇನಿಲ್ಲ, ಹಿನ್ನೆಲೆ ಸಂಗೀತ ಇನ್ನಷ್ಟು ಪರಿಣಾಮಕಾರಿಯಾಗಿರಬೇಕಿತ್ತು.  ನಿರ್ದೇಶಕ ನಾಗರಾಜ್ ಎಂಜಿ. ಗೌಡ ಅವರ ಮೊದಲ ಪ್ರಯತ್ನ ಎಂಬ ಕಾರಣಕ್ಕೆ,  ಮೊದಲ ಚಿತ್ರದಲ್ಲೇ ಹೊಸತನದ ಕಥೆ ಹೇಳಿರುವ ಶೈಲಿಯನ್ನು ಮೆಚ್ಚಬೇಕು,  ಇನ್ನು ಈ ಚಿತ್ರಕ್ಕೆ  ರಘು ಎಸ್, ಮಂಜು ಡಿ.ಟಿ, ಸಿದ್ದಮ್ಮ ಕಂಬಾರ್, ಮಹಂತೇಶ್ ನೀಲಪ್ಪ ಚೌಹಾಣ್ ಹಾಗೂ ವಿ.ಬೆಟ್ಟೇಗೌಡ ಇವರೆಲ್ಲ ಸೇರಿ ಬಂಡವಾಳ ಹಾಕಿದ್ದು, ಇವರೆಲ್ಲರೂ ರೈತರೆನ್ನುವುದು ಇಲ್ಲಿ ವಿಶೇಷ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed